ಪಿಯರ್ಸ್, ಫ್ರಾಂಕ್ಲಿನ್		
1804-1869. ಅಮೆರಿಕ ಸಂಯುಕ್ತ ಸಂಸ್ಥಾನಗಳ 14 ನೆಯ ಅಧ್ಯಕ್ಷ (1853-57) 1804 ರ ನವೆಂಬರ್ 23 ರಂದು ನ್ಯೂ ಹ್ಯಾಂಪ್‍ಷೈರ್‍ನ ಹಿಲ್ಸ್‍ಬೋರೋದಲ್ಲಿ ಜನಿಸಿದ. ತಂದೆ ಬೆಂಜಮಿನ್ ಪಿಯರ್ಸ್ (1758-1839) ಅಮೆರಿಕದ ಕ್ರಾಂತಿಯಲ್ಲಿ ಭಾಗವಹಿಸಿದ್ದನಲ್ಲದೆ, ನ್ಯೂ ಹ್ಯಾಂಪ್‍ಷೈರ್ ವಿಧಾನಮಂಡಲದ ಡೆಮೊಕ್ರಾಟಿಕ್ ಸದಸ್ಯನಾಗಿದ್ದ. ಎರಡು ಬಾರಿ ಆ ರಾಜ್ಯದ ಗವರ್ನರನೂ ಆಗಿ ಆಯ್ಕೆಗೊಂಡಿದ್ದ. ಫ್ರಾಂಕ್ಲಿನ್ ಪಿಯರ್ಸ್ 1827ರಲ್ಲಿ ವಕೀಲ ವೃತ್ತಿಯನ್ನು ಕೈಗೊಂಡ.
ಫ್ರಾಂಕ್ಲಿನ್ ಪಿಯರ್ಸ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯನಾಗಿ 1829 ರಲ್ಲಿ ನ್ಯೂ ಹ್ಯಾಂಪ್‍ಷೈರ್‍ನ ಪ್ರತಿನಿಧಿ ಸಭೆಯ ಸದಸ್ಯನಾದ. 1831 ಮತ್ತು 1832 ರಲ್ಲಿ ಅದರ ಸಭಾಪತಿಯಾಗಿದ್ದ. ಮರುವರ್ಷ ರಾಷ್ಟ್ರೀಯ ಪ್ರತಿನಿಧಿ ಸಭೆಗೆ ಚುನಾಯಿತನಾದ. ಇವನು ಸೆನೆಟ್ ಸದಸ್ಯನಾದ್ದು 1837 ರಲ್ಲಿ ಆದರೆ ಆ ಸದಸ್ಯತ್ವದ ಅವಧಿ ಮುಗಿಯುವ ಮೊದಲೇ (1842) ರಾಜೀನಾಮೆ ಇತ್ತು ಕನ್‍ಕರ್ಡ್‍ನಲ್ಲಿ ನ್ಯಾಯವಾದಿಯಾಗಿ ಕೆಲಸ ಆರಂಭಿಸಿದ. ಫೆಡರಲ್ ಜಿಲ್ಲೆಯ ಅಟಾರ್ನಿಯಾದ. ಸೆನೆಟ್ ಸಭೆಯಲ್ಲಿ ಖಾಲಿ ಬಿದ್ದ ಸ್ಥಾನದಲ್ಲಿ ಅದರ ಅವಧಿಯ ಉಳಿದ ಭಾಗದಲ್ಲಿ ಸದಸ್ಯನಾಗಿರಲೂ ಅಧ್ಯಕ್ಷ ಪೋಕನ ಸಂಪುಟದಲ್ಲಿ ಅಟಾರ್ನಿ ಜನರಲ್ ಹುದ್ದೆ ಸ್ವೀಕರಿಸಲೂ ಆಹ್ವಾನ ಬಂತು. ಆದರೆ ಪಿಯರ್ಸ್ ಇವನ್ನು ಒಪ್ಪಿಕೊಳ್ಳಲಿಲ್ಲ. ಪೂರ್ಣವಾಗಿ ರಾಜಕೀಯ ಜೀವನದಿಂದ ನಿವೃತ್ತನಾಗಿರುವುದಾಗಿ ಇವನು ಘೋಷಿಸಿದ. 

1846 ರಲ್ಲಿ ಮೆಕ್ಸಿಕೋದೊಂದಿಗೆ ಯುದ್ಧ ಆರಂಭವಾದಾಗ ಪಿಯರ್ಸ್ ಕನ್‍ಕರ್ಡ್‍ನಲ್ಲಿ ಸೈನಿಕನಾಗಿ ಸೇರಿದ. ಶೀಘ್ರದಲ್ಲೇ ಕರ್ನಲನೂ ಅನಂತರ ಬ್ರಿಗೇಡಿಯರ್ ಜನರಲ್ಲನೂ ಆದ. ಕದನವೊಂದರಲ್ಲಿ ಇವನು ಗಾಯಗೊಂಡ. ಯುದ್ಧ ಮುಗಿದ ಮೇಲೆ ಇವನು ವಕೀಲ ವೃತ್ತಿಯನ್ನು ಮುಂದುವರಿಸಿದ. 1852 ರಲ್ಲಿ ಪಿಯರ್ಸ್ ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ವಿಜಯ ಗಳಿಸಿದ ; ಮತ್ತು ಮಾರ್ಚ್ 4, 1853 ರಲ್ಲಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ.
ಗುಲಾಮತನ ನಿರ್ಮೂಲನ ಚಳವಳಿಗೆ ಅವನ ವಿರೋಧವಿತ್ತು. ಆಕ್ರಮಣಕಾರಿಯಾದ ಆದರೆ ಗೌರವಯುತವಾದ ವಿದೇಶಾಂಗ ನೀತಿ ಇವನದಾಗಿತ್ತು. ನೆರೆಯ ಕ್ಯೂಬವನ್ನು ವಶಪಡಿಸಿಕೊಳ್ಳಲು ಪಿಯರ್ಸ್ ಪ್ರಯತ್ನಿಸಿದ.
ಪಿಯರ್ಸನ್ ಅಧ್ಯಕ್ಷತೆಯ ಕಾಲದಲ್ಲಿ ದೇಶಾದ್ಯಂತ ರೈಲ್ವೇ ಮಾರ್ಗಗಳ ನಿರ್ಮಾಣ ಕಾರ್ಯ ಆರಂಭವಾಯಿತು. ಅಧ್ಯಕ್ಷತೆಯ ಅವಧಿಯ ಅನಂತರ ಪಿಯರ್ಸ್ ತನ್ನ ಉಳಿದ ಕಾಲವನ್ನು ಬಹುತೇಕ ಕನ್‍ಕರ್ಡ್‍ನಲ್ಲೇ ಕಳೆದ. 1869 ರ ಅಕ್ಟೋಬರ್ 8 ರಂದು ಕಾಲವಾದ.											(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ